Wednesday 21 July 2021

ಸಾವಯವ-ಸಾಯುತ್ತಿರುವ ರೈತ: ಬಳಕೆದಾರ... !?


                         ಬರಹ
: ಕೂಡಂಡ ರವಿ
, ಹೊದ್ದೂರು, ಕೊಡಗು.

 


 

 

 

ಈಗ ಎಲ್ಲೆಲ್ಲೂ ಸಾವಯುವ ಕೃಷಿಯ ಮಾತು. ಇಂತಹ ಕೃಷಿಯ ಉತ್ಪನ್ನಗಳಿಗೆ ಬೇಡಿಕೆ ಅಧಿಕ. ಹಲವರು ಸಾವಯುವ ಹೆಸರನ್ನು ದುರ್ಬಳಕೆ ಮಾಡಿ ರೈತಾಪಿ ವರ್ಗವನ್ನು, ಬಳಕೆದಾರರನ್ನು ವಂಚಿಸುತ್ತಿರುವುದು ಹೆಚ್ಚಾಗುತ್ತಿದೆ.


ಉದಾಹರಣೆಗಾಗಿ ಸಾವಯವ ಕೃಷಿಗೆ ದೃಡೀಕರಣ ಪತ್ರ ನೀಡುವಾಗ ರೈತರ ಜಮೀನ ಮಣ್ಣು ಇಂತಹ ಗುಣಗಳನ್ನು ಹೊಂದಿರಬೇಕು. ಅಂತಹ ಜಮಿನಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಇಂತಿಷ್ಟೇ ಇರಬೇಕು. ಬೆಳೆದ ಬೆಳೆಯಲ್ಲಿ ರಾಸಾಯನಿಕದ ಅಂಶಗಳು ಇರಬಾರದು. ರಾಸಾಯನಿಕ ಗೊಬ್ಬರದ ಸೂಚ್ಯಂಕದ ಮಟ್ಟವು ಇಂತಿಷ್ಟೇ ಇರಬೇಕೆಂಬ ಮಾನದಂಡವೇ ಇಲ್ಲ ! ಆದರೂ, ಹಲವಾರು ಕಡೆ ಸಾವಯವ ಸರ್ಟಿಫಿಕೇಟ್ಗಳು ಬಿಕರಿಯಾಗುತ್ತಿವೆ ! ಇಲ್ಲಿ ವಿಪರ್ಯಾಸದ ಅಂಶವೆAದರೆ, ಸಾವಯವ ದೃಡೀಕರಣ ಪತ್ರ ಪಡೆದ ಆ ಬೆಳೆಗಾರ ಬಳಿಕ ರಾಸಾಯನಿಕ ವಸ್ತುಗಳ ಮೊರೆ ಹೋಗಬಾರದು ಎಂದೇನೂ ಇಲ್ಲವಲ್ಲ. ಅಂತಹ ದೃಡೀಕರಣ ಪತ್ರ ಹೊಂದಿರುವಾತ, ಒಂದು ಏಕರೆಗೆ ಪ್ರಮಾಣ ಪತ್ರ ಮಾಡಿಸಿ, ಬಳಿಕ ರಾಸಾಯನಿಕಕ್ಕೆ ಮೊರೆ ಹೋಗುವ ಸಂಭವ ಹೆಚ್ಚು. ಅಥವಾ ಅರ್ಧ ಏಕರೆಗೆ ಸಾವಯವ ದೃಡೀಕರಣ ಪತ್ರ ಪಡೆದು, ಉಳಿದ ಜಮೀನಿನಲ್ಲಿ ರಾಸಾಯನಿಕ ಬಳಸಿ, ಬೆಳೆ ಬೆಳೆದು ಮಿಶ್ರಣ ಮಾಡಿ ಮಾರಾಟ ಮಾಡಿ ಖರೀದಿದಾರನಿಗೆ ಮೋಸ ಮಾಡಬಹುದು. ಇಲ್ಲವಾದಲ್ಲಿ ರಾಸಾಯನಿಕ ಬಳಸಿ ಬೆಳೆದ ಬೆಳೆಗಳನ್ನು ಬೇರೆಯವರಿಂದ ಖರೀದಿಸಿ ಸಾವಯವ ಎಂಬ ಹೆಸರಿನಲ್ಲಿ ಮಾರಾಟ ಮಾಡಲೂ ಬಹುದು.

ಇದೇ ರೀತಿ ಗೊಬ್ಬರ ಮತ್ತು ಕೀಟ-ಕಳೆನಾಶಕದ ಪಾಡು. ಹಾಗಾದಲ್ಲಿ ಬಳಕೆದಾರರ ಪಾಡೇನು ? ಇದು ಸಾವಯವ ಎನ್ನಲು ನಾಮದ ಬಲವೊಂದೇ ಸಾಕೆ ? ಬೇರೇನೂ ಬೇಡವೇ ?

ಕುಲಾಂತರಿ ಬೀಜಗಳ ಬಳಕೆ !

ಸಾವಯವ ಬೆಳೆಗೆ ಕುಲಾಂತರಿ ಬೀಜಗಳ ಬಳಕೆ ಮಾಡಬಾರದು ಎಂಬ ನಿಯಮವಿದೆ. ಅದರೆ, ಎಷ್ಟು ಮಂದಿ ಈ ನಿಯಮ ಪಾಲಿಸುತ್ತಾರೆ ! ಇದನ್ನು ಖತರಿ ಪಡಿಸಿಕೊಳ್ಳುವ ಮಾರ್ಗವಾದರೂ ಯಾವುದು ? ಇಲ್ಲಿ ಮಣ್ಣು ಮತ್ತು ಬೆಳೆಯ ಪರೀಕ್ಷಗೆ ಸೂಕ್ತ ಮಾನದಂಡಗಳಿಲ್ಲ ! ಹಾಗಾದಲ್ಲಿ ಸಾವಯವ ದೃಡೀಕರಣ ಪತ್ರ ಕೇವಲ ನಾಟಕವೇ ?

ಗ್ರಾಹಕರು ರೈತರ ಜಮೀನಿಗೆ ಭೇಟಿ ನೀಡಿ ಅವರು ಬೆಳೆಯುತ್ತಿರುವ ವಿಧಾನವನ್ನು ಪರಿಶೀಲಿಸಲು ಸಾಧ್ಯವೇ ? ಹಲವು ನಗರ ಪಟ್ಟಣಗಳಲ್ಲಿ ಸಾವಯವ ತರಕಾರಿಗಳನ್ನು ಮಾರುವ ಮಳಿಗೆಗಳಿವೆ. ಇಲ್ಲಿ ಬಳಕೆದಾರನಿಗೆ ಮೋಸವಾಗುವುದಿಲ್ಲವೇ ? ಅದನ್ನು ತಡೆಯುವರಾರು ? ಇಂತಹ ಮೋಸದ ವ್ಯವಹಾರಗಳಿಂದ ನೈಜ ಸಾವಯವ ಕೃಷಿಕ ಬಾಂಧವರಿಗೆ ಮೋಸವಾಗುತ್ತಿದೆ. ಸಾವಯವ ತರಕಾರಿ ಬೇಕು ಎಂಬ ಬಳಕೆದಾರನಿಗೆ ಎಲ್ಲಾ ಕೃಷಿಕರ ಮೇಲೂ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇದನ್ನು ಸರಿ ಪಡಿಸುವವರಾರು? ಹೇಗೆ ಸರಿ ಪಡಿಸುವುದು ಎಂಬ ವಿಚಾರಗಳು ಚರ್ಚೆಯಾಗಬೇಕಿದೆ. ಅದು ಕಟ್ಟುನಿಟ್ಟಾಗಿ ಅನುಷ್ಠಾನವಾಗಬೇಕಿದೆ. ಈ ಬಗ್ಗೆ ಕೊಳ್ಳುಗರು ರೈತಾಪಿ ವರ್ಗದವರು ಎಚ್ಚರ ವಹಿಸಬೇಕಾಗಿದೆ.

ಸದ್ಯಕ್ಕೆ ಸಾವಯವ ತರಕಾರಿಯು ಬೆಳೆಗಾರನ ನೈತಿಕತೆಯನ್ನು ಅವಂಬಿಸಿಯೇ ಹೊರತು ಯಾರ ಸರ್ಟಿಫಿಕೇಟಿನ ಹಂಗಿನಲ್ಲಿ ಇಲ್ಲ.

ಗೊಬ್ಬರದಲ್ಲಿ ಗೋಲ್ಮಾಲ್ !

ಹಲವರು ಸಾವಯವ ಗೊಬ್ಬರ ಎಂದು ಯಾವುದೋ ಮಿಶ್ರಣವನ್ನು ಮನೆ- ಮನೆಗಳಿಗೆ ವಿತರಿಸುತ್ತಾರೆ. ಅದು ಯಾವ ಗೊಬ್ಬರ ಎಂದು ಮಾರುವವರಿಗೆ ತಿಳಿದಸಿರುವುದಿಲ್ಲ. ಕೊಳ್ಳುವವರಿಗೂ ಇದರ ಸುಸ್ಪಷ್ಟ ಮಾಹಿತಿಯೂ ಇರುವುದಿಲ್ಲ. ಕೆಲವರು ಮನೆಯಲ್ಲಿ ಹಸು-ಕರು ಸಾಕಲಾಗದೆ ಸಾವಯವ ಎಂಬ ಹೆಸರನ್ನು ನೋಡಿ ಇಂತಹ ಗೊಬ್ಬರ ಖರೀದಿಸುತ್ತಾರೆ. ಇಂತಹ ಮಾರಾಟಗಾರರ ಬಳಿ ಎಂದೋ ನೀಡಿದ ದೃಡೀಕರಣ ಪತ್ರದ ನಕಲು ಪ್ರತಿ ಇರುತ್ತದೆ. ಕೆಲವೊಮ್ಮೆ ಇಂತಹ ಗೊಬ್ಬರದಲ್ಲಿ ಗಾಜಿನ ಪುಡಿ, ಬಯಲು ಸೀಮೆಯ ಕಪ್ಪು ಮಣ್ಣು, ಇದ್ದಲು ಇತ್ಯಾದಿಗಳಿರುತ್ತದೆ. ಹಲವು ಕಡೆ ಸಿಮೆಂಟ್ ಪುಡಿಯನ್ನು ಮಾರಾಟ ಮಾಡುವ ಏಜೆನ್ಸಿಗಳಿದ್ದಾರೆ !

ಕೃಷಿಕ ಮಿತ್ರರು ಈ ಬಗ್ಗೆ ಎಚ್ಚರವಾಗಿದಿದ್ದಲ್ಲಿ ನಿಮಗೆ ಟೋಪಿ ಖಚಿತ !


ಇದಕ್ಕೆ ಎಲ್ಲಾ ಪರಿಹಾರ ಗೋಆದಾರಿತ ವಿಷರಹಿತ ನೈಸರ್ಗಿಕ ಕೃಷಿ !!!

No comments:

Post a Comment