Monday 12 July 2021

ಪ್ರತೀ ಬಾರಿಯೂ ದುಬಾರಿ !


ಬರಹ: ಕೂಡಂಡ ರವಿ. ಕೊಡಗು.




ಬೇಸಿಗೆಯ ಬಿಸಿಲ ಝಳ ಜನತೆಯ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ದಾಹ, ದಾಹ, ದಾಹ ! ಮನೆಯಿಂದ ಹೊರಗೆ ಹೋದಲ್ಲಿ ಶುದ್ಧ ಕುಡಿಯುವ ನೀರಿಗೂ ಬರ ! ಇದನ್ನೇ ದಾಳವಾಗಿ ಬಳಸುತ್ತಿರುವ ವರ್ತಕ ಸಮುದಾಯ ತಂಪಿನ ನಿಂಬೆ ಶರಬತ್ತಿಗೂ ದುಬಾರಿ ಬೆಲೆ ತೆರುವಂತೆ ಮಾಡಿದೆ. ಒಂದು ಲೋಟ ಶರಬತ್ತಿಗೆ 15 ರೂಪಾಯಿ ಸಣ್ಣ ಪುಟ್ಟ ಗೂಡಂಗಡಿಗಳಲ್ಲಿ ! ನಿಂಬೆ ಹಣ್ಣಿಗೆ 5ರಿಂದ 8ರೂಪಾಯಿಗೂ ಹೆಚ್ಚು !
ಅಂಗಡಿ ಹೋಟೇಲ್‍ಗಳ ಗುಣಮಟ್ಟ ಏರಿದಂತೆ ಶರಬತ್ತಿನ ದರವೂ ಏರುತ್ತಿದೆ. ಅದು ಗ್ರಾಹಕನ ಜೇಬಿಗೆ ಕನ್ನ ಹಾಕುತ್ತದೆ. ಪರಿಣಾಮ ಅತ್ಯಂತ ಆರೋಗ್ಯಪೂರ್ಣ ನೈಸರ್ಗಿಕ ಪಾನೀಯವಾದ ನಿಂಬೆ ಹಣ್ಣಿನ ಶರಬತ್ತನ್ನು ಮೆಚ್ಚಿ ಸೇವಿಸುತ್ತಾರೆ.
ಕಿಲೋಗ್ರಾಂಗೆ 200 !
  ಈ ಹಿನ್ನೆಲೆಯಲ್ಲಿ ನಿಂಬೆ ಹಣ್ಣಿನ ದರವು ದಿನೇ ದಿನೇ ಏರುತ್ತಿದೆ. ಪ್ರತೀ ಕಿಲೋಗ್ರಾಂಗೆ 30-40ರೂಪಾಯಿಗಳ ಅಸುಪಾಸಿನಲ್ಲಿದ್ದ ನಿಂಬೆಹಣ್ಣಿನ ಧಾರಣೆ 60ರಿಂದ 100ಕ್ಕೆ ಏರಿದೆ. ಆನ್‍ಲೈನ್‍ನಲ್ಲಿ ಪ್ರತೀ ಕಿಲೋ ನಿಂಬೆಹಣ್ಣಿಗೆ 200ಕ್ಕೂ ಅಧಿಕ ಬೆಲೆ ಇದೆ. ಗಾತ್ರ, ಬಣ್ಣ, ರುಚಿ ಮುಂತಾದ ವೈವಿಧ್ಯತೆಗೆ ತಕ್ಕಂತೆ ಬೆಲೆ ಏರುತ್ತಿದೆ.
ಪರಿಸ್ಥಿತಿಯ ಲಾಭ !
ಇಂತಹ ಪರಿಸ್ಥಿತಿಯ ಲಾಭ ಪಡೆಯಲು ರೈತಾಪಿ ಸಮುದಾಯ ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು. ನಿಮ್ಮ ಬೇಲಿಯ ಅಂಚಿನಲ್ಲಿ, ಬದುಗಳ ಪಕ್ಕದಲ್ಲಿ ಉತ್ತಮ ತಳಿಯ ಸಾಕಷ್ಟು ಹೆಚ್ಚು ಫಲವನ್ನು ಬೇಗನೆ ಬಿಡುವ ನಿಂಬೆ ಗಿಡಗಳನ್ನು ನೆಡಬೇಕು. ಸಾಧ್ಯವಾದಲ್ಲಿ ಹಲವಾರು ತಳಿಗಳನ್ನು ಆರಿಸಿಕೊಳ್ಳಿ.
 ಕಸಿ ಗಿಡಗಳನ್ನು ನೆಡಿ
 ಮಾಹಿತಿಗಾಗಿ ಸಮೀಪದ ಕೃಷಿ ಕೇಂದ್ರ ಅಥವಾ ನಿಮ್ಮ ಊರಿನ ಪ್ರಗತಿಪರ ಕೃಷಿಕರ ಬಳಿ ಚರ್ಚಿಸಿ ಗಿಡಗಳನ್ನು ಕೊಂಡು ಕೊಳ್ಳಿ. ಕಸಿ ಗಿಡಗಳು ಕೊಂಚ ದುಬಾರಿ. ಅವುಗಳನ್ನು ನಿಮ್ಮ ಪರಿಚಯದ ಸಸ್ಯಗಾರದಿಂದ(ನರ್ಸರಿ) ಖರೀದಿಸಿ. ಇಲ್ಲವಾದಲ್ಲಿ ನೀವು ಮೋಸಹೋಗುವ ಸಂಭವ ಹೆಚ್ಚು ! ಅಥವಾ ನೀವೆ ಕಸಿ ಮಾಡಲು ಕಲಿಯಿರಿ.
ಮಳೆಗಾಲ ಮುಗಿದ ಕೂಡಲೆ ಅದಕ್ಕೆ ಶಿಫಾರಸ್ಸು ಮಾಡಲಾದ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು. ಅಗತ್ಯಕ್ಕೆ ತಕ್ಕಂತೆ ನೀರು ಕೊಡಬೇಕು. ಹನಿ ನೀರಾವರಿಯಾದಲ್ಲಿ ಉತ್ತಮ. ಬೇಸಿಗೆಗೂ ಮುನ್ನಾ ಉತ್ತಮವಾಗಿ ಫಸಲು ನೀಡಲು ಆರಂಭವಾಗುತ್ತದೆ. ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಹುಡುಕಿದರೂ ನಿಂಬೆಹಣ್ಣು ನಿಮಗೆ ಸಿಗದು. ನಿಮ್ಮ ಬಳಿ ಮಾತ್ರ ನಿಂಬೆ ಹಣ್ಣು ಇದ್ದಲ್ಲಿ ನೀವು ಕೇಳಿದ ಬೆಲೆಗೆ ನಿಂಬೆ ಮಾರಾಟವಾಗುವುದು ಖಚಿತ. ಮಾರುಕಟ್ಟೆಯ ದರಕ್ಕಿಂತ 10-20 ರೂಪಾಯಿ ಹೆಚ್ಚು ಕೇಳಿ. ನಿಮಗೆ ತೃಪ್ತಿ ದೊರೆತಲ್ಲಿ ಮಾರಿ.
 ಅಂಗಡಿ ತೆರೆಯಿರಿ
ಇಲ್ಲ,  ನಿಮ್ಮ ನೆರೆಹೊರೆಯ ಗೆಳೆಯರ ಬಳಿ ಬೆಲೆಯ ಬಗ್ಗೆ, ಮಾರುಕಟ್ಟೆಯ ಬಗ್ಗೆ ವಿಚಾರಿಸಿ. ಹೆಚ್ಚು ನಿಂಬೆ ಇದ್ದಲ್ಲಿ ಅಕ್ಕಪಕ್ಕದ ಬೆಳೆಗಾರರು ಸೇರಿ ಸ್ವಸಹಾಯ ಸಂಘ ಆರಂಭಿಸಿ. ಪ್ರಮುಖ ರಸ್ತೆ ಬದಿಯಲ್ಲಿ ಸಣ್ಣ ಅಂಗಡಿ ತೆರೆದು ಮಾರಲು ಪ್ರಯತ್ನಿಸಿ. ಹಣಕಾಸಿನ ಸಹಾಯಕ್ಕಾಗಿ ಸಮೀಪದ ಬ್ಯಾಂಕಿನಲ್ಲಿ ಪ್ರಯತ್ನಪಡಿ. ಅಂಗಡಿ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆಗೆ ಮಾರಿ. ದಿನಕ್ಕೆ ಒಬ್ಬರಂತೆ ನಿಮ್ಮ ಗೆಳೆಯರು ಅಂಗಡಿ ನಡೆಸಲಿ. ಬಂದ ಲಾಭವನ್ನು ಹಂಚಿಕೊಳ್ಳಿ. ಇಂತಹ ಅಂಗಡಿಗಳಲ್ಲಿ ನಿಮ್ಮ ಎಲ್ಲಾ ಕೃಷಿ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಿ ಅಧಿಕ ಲಾಭ ಪಡೆಯಬಹುದು. ಕೆಲಸಕ್ಕಾಗಿ ಹುಡುಕುವವರಿಗೆ ಕೆಲಸವಾದಂತೆ ಆಗಬಹುದು. ಪ್ರಯತ್ನಿಸಿ ನೋಡಿ.


No comments:

Post a Comment